ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಚಿಕ್ಕ ಮೇಳದ ದೊಡ್ಡ ಹೆಜ್ಜೆ

ಲೇಖಕರು :
ನಾ.ಕಾರ೦ತ, ಪೆರಾಜೆ
ಸೋಮವಾರ, ಸೆಪ್ಟೆ೦ಬರ್ 21 , 2015

"ಯಕ್ಷಗಾನ ಹೈಟೆಕ್ ಆಗತ್ತಿದೆ. ಕಲಾವಿದರು ಇನ್ಸ್ಟಂಟ್ ಆಗುತ್ತಿದ್ದಾರೆ.." - ಸಮಾರಂಭವೊಂದರಲ್ಲಿ ಮಾತಿನ ಮಧ್ಯೆ ಮಿಂಚಿದ ಗಣ್ಯರೊಬ್ಬರ ಮಾತು. ಹೌದು, ಯಕ್ಷಗಾನವನ್ನು ನೋಡುವ, ಅನುಭವಿಸುವ, ಅರ್ಥ ಮಾಡುವ್ ಮನಃಸ್ಥಿತಿ ಬದಲಾಗಿದೆ. ಸಮಗ್ರತೆಯ ನೋಟಕ್ಕೆ ಮಸುಕು ಬಂದಿದೆ. ಬಿಡಿಬಿಡಿಯಾದ ಮಾದರಿಗಳು ಚಿಗುರಿವೆ.

ಹೈಟೆಕ್ಕಿನ ಪಾಶಕ್ಕೆ ಸಿಗದ ಕಲಾವಿದರು ಎಷ್ಟಿಲ್ಲ? ಅವರದನ್ನು ಅಪೇಕ್ಷೆ ಪಡುವುದಿಲ್ಲ ಬಿಡಿ. ಆದರೆ ಬದುಕಿನ ಪ್ರಶ್ನೆ ಬಂದಾಗ ಮೇಳದ ತಿರುಗಾಟದಿಂದ ಆರು ತಿಂಗಳು ಹೊಟ್ಟೆ ತಂಪಾಗುತ್ತದೆ. ಮಿಕ್ಕುಳಿದ ಮಾಸಗಳಲ್ಲಿ ಯಕ್ಷಗಾನವಲ್ಲದೆ ಅನ್ಯ ಉದ್ಯೋಗ ಹೊಂದದು. ಈ ಆಶಯದಿಂದ 'ಶ್ರೀ ದುರ್ಗಾಪರಮೇಶ್ವರೀ (ಶ್ರೀ ಉಳ್ಳಾಲ್ತಿ) ಕೃಪಾಶ್ರಿತ ಯಕ್ಷಗಾನ ಮಂಡಳಿ, ಅಂಗ್ರಿ-ಕನ್ಯಾನ' ರೂಪುಗೊಂಡಿದೆ. ಉಳಿದ ಮೇಳಗಳು ಪತ್ತನಾಜೆಗೆ ಗೆಜ್ಜೆ ಬಿಚ್ಚಿ, ದೀಪಾವಳಿಗೆ ಗೆಜ್ಜೆ ಕಟ್ಟುವಲ್ಲಿಯ ತನಕ ಇದು ಸಕ್ರಿಯವಾಗಿದೆ. ಇದೀಗ ಎರಡನೇ ವರುಷದ ತಿರುಗಾಟ.

ಆರು ಮಂದಿ ಕಲಾವಿದರ 'ಚಿಕ್ಕ ಮೇಳ'. ಹಿಂದಿನ ಕಲಾವಿದರನ್ನು ಮಾತನಾಡಿಸಿದಾಗ ತಾವೂ ಚಿಕ್ಕಮೇಳಗಳಲ್ಲಿ ಬಣ್ಣ ಹಚ್ಚಿದ ದಿವಸಗಳನ್ನು ನೆನಪಿಸಿಕೊಳ್ಳುತ್ತಾರೆ. ಒಂದು ಕಾಲಘಟ್ಟದಲ್ಲಿ ಕಲಾವಿದರಿಗೆ ಚಿಕ್ಕ ಮೇಳವೇ ಆಸರೆ. ಭಾಗವತ, ಚೆಂಡೆ-ಮದ್ದಳೆ ವಾದಕರು, ರಾಧಾ-ಕೃಷ್ಣ ವೇಷಗಳು ಮತ್ತು ಓರ್ವ ನಿರ್ವಹಣೆ. ಮನೆಮನೆಗೆ ಭೇಟಿ ನೀಡಿ, ಪೌರಾಣಿಕ ಕಥಾನಕದ ಒಂದು ಸನ್ನಿವೇಶದ ಸಂಭಾಷಣೆಯನ್ನು ಪ್ರಸ್ತುತಪಡಿಸುತ್ತಾರೆ. ಮನೆಯವರು ನೀಡುವ ಸಂಭಾವನೆಯ ಮೊತ್ತಗಳು ತಂಡದ ಉಸಿರು. ಅಲ್ಲಿಲ್ಲಿ ಕೆಲವು ತಂಡಗಳು ಸದ್ದು ಮಾಡುತ್ತಿವೆ.

ಕನ್ಯಾನ-ಅಂಗ್ರಿಯ 'ಚಿಕ್ಕಮೇಳ'ವು ಪುತ್ತೂರು ಪರಿಸರದಲ್ಲಿ ಕಳೆದ ವರುಷ ಯಶಸ್ವಿ ತಿರುಗಾಟ ಮಾಡಿದೆ. ನಗರವನ್ನೂ ಸೇರಿಸಿಕೊಂಡು ಸುತ್ತಲಿನ ಹಳ್ಳಿಗಳಲ್ಲಿ ಚೆಂಡೆಮದ್ದಳೆಯ ಸದ್ದನ್ನು ಅನುರಣಿಸಿದೆ. ಜನರು ಹಾರ್ದಿಕವಾಗಿ ತಂಡವನ್ನು ಸ್ವೀಕರಿಸಿದ್ದಾರೆ. ಅನ್ಯಧರ್ಮೀಯರೂ ಸ್ಪಂದಿಸಿದ್ದಾರೆ. ತಂಡದ ಸದಸ್ಯರ ಸೌಜನ್ಯ ನಡವಳಿಕೆಯು ವಿಶ್ವಾಸವೃದ್ಧಿಗೆ ಕಾರಣವಾಗಿದೆ. ನಾಲ್ಕು ತಿಂಗಳುಗಳಲ್ಲಿ ಸಾವಿರ, ಸಾವಿರದೈನೂರು ಮನೆಗಳಿಗೆ ಮೇಳ ಕಾಲಿಟ್ಟಿದೆ.

"ಚಿಕ್ಕಮೇಳದ ವೇಷವು ಅಂಗಳದಲ್ಲಿ ಕುಣಿಯದು. ಮನೆಯ ಒಳಗಡೆ ಚಾವಡಿಯಲ್ಲಿ ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತಾರೆ. ಇದನ್ನು ಒಪ್ಪದ ಮಂದಿ ಇದ್ದಾರೆ. ಜಗಲಿಗೆ ಪ್ರವೇಶ ಕೊಡದ ಸಹೃದಯಿಗಳಿದ್ದಾರೆ! ತಂಡ ಅಂಗಳಕ್ಕೆ ಬಂದಾಗ ಹಗುರವಾಗಿ ವ್ಯವಹರಿಸಿದವರೂ ಇದ್ದಾರೆ. ಯಕ್ಷಗಾನದ ಮುಂದೆ ಮಾನ-ಅಪಮಾನ ನಮಗೆ ಸಮಾನ." ಎನ್ನುತ್ತಾರೆ ತಂಡದ ಮುಖ್ಯಸ್ಥ ಜಗದೀಶ ಕನ್ಯಾನ. ಇವರು ಶ್ರೀ ಕಟೀಲು ಮೇಳದ ಕಲಾವಿದ.

ದಿವಸಕ್ಕೆ ಇಪ್ಪತ್ತರಿಂದ ಇಪ್ಪತ್ತೈದು ಮನೆಗಳ ಆಯ್ಕೆ. ಮೊದಲೇ ಗೊತ್ತುಮಾಡಿ ಕರಪತ್ರವನ್ನು ಹಂಚುತ್ತಾರೆ. ಸಂಜೆ ಆರಕ್ಕೆ ದಿಗ್ವಿಜಯ ಹೊರಟರೆ ಹತ್ತೂವರೆಗೆ ಅಂದಂದಿನ ತಿರುಗಾಟ ಕೊನೆ. ಇಪ್ಪತ್ತು ರೂಪಾಯಿಯಿಂದ ಒಂದು ಸಾವಿರ ರೂಪಾಯಿ ತನಕ ಸಂಭಾವನೆಯನ್ನು ನೀಡಿದ ಕಲಾ ಪೋಷಕರ ಪ್ರೋತ್ಸಾಹವನ್ನು ನೆನೆಯುತ್ತಾರೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ತಂಡಕ್ಕೆ ವಸತಿ, ಅಶನದ ಕಲಾಶ್ರಯ ನೀಡಿದೆ. ಒಂದೆರಡು ಯುವಕ ಮಂಡಲವು ತಂಡಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಿ ತನ್ನ ವ್ಯಾಪ್ತಿಯ ಎಲ್ಲಾ ಮನೆಗಳ ಸಂದರ್ಶನಕ್ಕೆ ಅನುವು ಮಾಡಿಕೊಟ್ಟಿತ್ತು.

ಚಿಕ್ಕ ಮೇಳವು ಕೇವಲ ಕುಣಿತಕ್ಕೆ ಸೀಮಿತವಾಗಿಲ್ಲ. ಮಾನವೀಯ ಸ್ಪಂದನವನ್ನು ಹೂರಣಕ್ಕೆ ಸೇರಿಸಿಕೊಂಡಿದೆ. ತಂಡವು ಹೋದಾಗ ಆ ಮನೆಯಲ್ಲಿ ಯಾರಿಗಾದರೂ ಅಸೌಖ್ಯವಿದೆ ಎಂದಿಟ್ಟುಕೊಳ್ಳೋಣ. ಮನೆಯ ಯಜಮಾನ ನೀಡಿದ ಸಂಭಾವನೆಗೆ ಒಂದಿಷ್ಟು ತಮ್ಮ ದೇಣಿಗೆಯನ್ನೂ ಸೇರಿಸುತ್ತಾರೆ. ವೇಷ ಕುಣಿದ ಬಳಿಕ ಪ್ರಸಾದರೊಂದಿಗೆ ಈ ಮೊತ್ತವನ್ನು ಸಹಕಾರದ ನೆಲೆಯಲ್ಲಿ ಮರಳಿಸುತ್ತಾರೆ. ಮೊತ್ತ ಕಿಂಚಿತ್ ಆಗಿರಬಹುದು, ಆದರೆ ಇಂತಹ ಮಾನವೀಯ ಮುಖ ಯಾವ ಹೈಟೆಕ್ ವ್ಯವಸ್ಥೆಯಲ್ಲಿದೆ? ತಂಡದ ಸದಸ್ಯರು ಶ್ರೀಮಂತರಲ್ಲ, ಅವರಲ್ಲಿ ಹೃದಯ ಶ್ರೀಮಂತಿಕೆ ಇದೆ. ಕಷ್ಟ-ಸುಖಗಳ, ನೋವು-ನಲಿವುಗಳ ಅನುಭವವಿದೆ. ಸಮಾಜದಲ್ಲಿ ಕಲಾವಿದರ ಕುರಿತು ಗೌರವ ಭಾವನೆ ಮೂಡಲು ಈ ಕಾರ್ಯಹೂರಣವೊಂದೇ ಸಾಕು.

ಈ ವರುಷ ಪುತ್ತೂರಿನಿಂದ ಮೇಳ ಹೊರಟಿದೆ. ತಂಡವು ಅನುಭವಿ ಗುರುಗಳಿಂದ ನಾಟ್ಯ ತರಬೇತಿ ಆರಂಭಿಸಿದೆ. ಬಣ್ಣದ ತರಗತಿಗಳನ್ನು ಏರ್ಪಡಿಸುವ ಯೋಜನೆ ಹೊಂದಿದೆ. ಚಿಕ್ಕಮೇಳದ ತಿರುಗಾಟದ ನೆನಪಿಗಾಗಿ ಕನ್ಯಾನದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಿಂಚಿತ್ ದೇಣಿಗೆ ನೀಡಲು ನಿರ್ಧರಿಸಿದ್ದೇವೆ. ಈ ವರುಷ ಎರಡು ತಂಡವಾಗಿದೆ. ಒಂದು ಪುತ್ತೂರು ಸುತ್ತಮುತ್ತ ತಿರುಗಾಟ ಮಾಡಿದರೆ ಮತ್ತೊಂದು ಕಬಕವನ್ನು ಕೇಂದ್ರವಾಗಿಟ್ಟುಕೊಂಡಿದೆ, ಎನ್ನುತ್ತಾರೆ ಜಗದೀಶ್.

ಚಿಕ್ಕ ಮೇಳದ ತಂಡಕ್ಕೆ ಹೊಟ್ಟೆಪಾಡಿನ ಉದ್ದೇಶವಾದರೂ ಅದರಲ್ಲಿ ಸಾಮಾಜಿಕ ಕಳಕಳಿ, ಶಿಸ್ತು, ಪ್ರಾಮಾಣಿಕತೆ ಮತ್ತು ಬದ್ಧತೆಯಿದೆ. ಈ ನಾಲ್ಕು ಅಂಶಗಳು ಜೀವಂತವಾಗಿರುವ ತನಕ ತಂಡ ಸದೃಢ. ಜತೆಗೆ ಯಕ್ಷಗಾನದ ಕುರಿತು ಅಪ್ಪಟ ಪ್ರೀತಿಯೂ ಸೇರಿದೆ.

ರಿಮೋಟ್ಗಳು ಸಾಂಸ್ಕೃತಿಕ ಆಯ್ಕೆಯನ್ನು ಮಾಡುತ್ತಿರುವ ಪ್ರಸ್ತುತ ದಿನಮಾನದಲ್ಲಿ ಯಕ್ಷಗಾನದ ಮಾದರಿಯನ್ನು ಮನೆಮನೆಗೆ ಒಯ್ಯುವ ಚಿಕ್ಕಮೇಳದ ಸಾಧನೆಯೊಂದು ದೊಡ್ಡ ಹೆಜ್ಜೆ.





*********************
ಕೃಪೆ : yakshamatu.blogspot



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ